ಮೆಕ್ಕಾ
ಮುಸ್ಲಿಮರ ಪವಿತ್ರ ಯಾತ್ರಾಸ್ಥಳ ಹಾಗೂ ಮುಹಮ್ಮದ್ ಪೈಗಂಬರನ ಜನ್ಮಸ್ಥಳ. ಸೌದಿ ಅರೇಬಿಯದ ಹೇಜಸ್‍ನ ಮುಖ್ಯಪಟ್ಟಣ. ಜನಸಂಖ್ಯೆ 5,50.000 (1980). ಕೆಂಪು ಸಮುದ್ರದ ಜೆಡ್ಡಾ ರೇವು ಪಟ್ಟಣದಿಂದ ಪೂರ್ವಕ್ಕೆ 80 ಕಿಮೀ ದೂರದಲ್ಲಿರುವ ಈ ನಗರ ಒಂದುಕಾಲದಲ್ಲಿ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ಪ್ರವಾದಿ ಮುಹಮ್ಮದನ ಧರ್ಮಬೋಧೆ ಪ್ರಾರಂಭವಾದುದೂ ಈ ನಗರದಲ್ಲಿಯೇ. ಇಸ್ಲಾಮ್ ಧರ್ಮ ಅರೇಬಿಯದ ಹೊರಗಡೆ ಹರಡತೊಡಗಿದಾಗ, ಮೆಕ್ಕಾ ನಗರದ ರಾಜಕೀಯ ಪ್ರಭಾವ ಕುಂಠಿತಗೊಂಡು, ಧಾರ್ಮಿಕ ಮಹತ್ತ್ವ ಉಳಿದುಕೊಂಡಿತು.

	ಇದೊಂದು ಅಗಲವಾದ ಕಣಿವೆ. ಇದರ ಸುತ್ತಲೂ ಎತ್ತರದ ಬೆಟ್ಟಗಳಿವೆ. ಪಶ್ಚಿಮದಲ್ಲಿ ಉಪನಗರಗಳು ಬೆಳೆದಿವೆ. ಕಣಿವೆಯ ಅತ್ಯಂತ ವಿಶಾಲ ಭಾಗದಲ್ಲಿ ಮೆಕ್ಕಾ ನಗರದ ಮಹಾ ಮಸೀದಿಯಿದೆ. ಮಸೀದಿನಲ್ಲಿರುವುದು ವಿಸ್ತಾರ ಚತುಃಶಾಲೆ; ಚತುಃಶಾಲೆಯ ಸುತ್ತಲೂ ಅಮೃತಶಿಲೆಯ ಇಲ್ಲವೆ ಕರಿಕಲ್ಲಿನ ಸಾಲು ಗಂಬಗಳು; ಮಧ್ಯಭಾಗದಲ್ಲಿ ಕಾಬಾ (ನೋಡಿ- ಕಾಬಾ) ಶಿಲೆಯಿದೆ. ಇಸ್ಲಾಮ್ ಮತಸ್ಥಾಪನೆಗೂ ಹಿಂದೆಯೇ ನಿರ್ಮಿತವಾಗಿ, ಮತ್ತೆ ಪುನರ್ನಿರ್ಮಿತವಾದ ಈ ಕಾಬಾವೇ ಇಸ್ಲಾಮ್ ಧರ್ಮದ ಗರ್ಭಗುಡಿ. ಕಾಬಾವಿನ ಆಗ್ನೇಯ ಮೂಲೆಯ ಗೋಡೆಯಲ್ಲಿ ಬೆಳ್ಳಿಯ ಚೌಕಟ್ಟಿನಲ್ಲಿ ಅಚ್ಚಿರಿದಿಟ್ಟ ಶ್ಯಾಮಲ ಶಿಲೆ ಇಸ್ಲಾಮ್ ಧರ್ಮಕ್ಕೂ ಪೂರ್ವದಲ್ಲಿಯೇ ಪರಮ ಪೂಜ್ಯವಸ್ತುವಾಗಿದ್ದಿತು. ಈ ಶ್ಯಾಮಲ ಶಿಲೆ ಇಸ್ಲಾಮ್ ಧರ್ಮದ ಅತ್ಯಂತ ಪವಿತ್ರ ಸಂಕೇತ; ಯಾತ್ರಿಕರು ಅದಕ್ಕೆ ಮುತ್ತಿಡುತ್ತಾರೆ; ಇಲ್ಲವೆ ವಂದನೆ ಸಲ್ಲಿಸುತ್ತಾರೆ. ನೈಋತ್ಯಮೂಲೆಯಲ್ಲಿ ಕಂದುಬಣ್ಣದ ಯೆಮಿನಿ ಶಿಲೆಯಿದೆ. ಅದನ್ನು ಯಾತ್ರಿಕರು ಸ್ಪರ್ಶಿಸಬೇಕು. ಮನಸೆಳೆಯುವ ಕಸೂತಿ ಹಾಕಿದ ಕರಿಯ ದುಕೂಲ ಕಾಬಾವನ್ನು ಅಡಿಯಿಂದ ಮುಡಿಯವರೆಗೆ ಶೃಂಗರಿಸಿರುತ್ತದೆ. ಈ ದುಕೂಲಕ್ಕೆ ಕಿಸ್ವಾ ಎಂದು ಹೆಸರು. ಇದು ಈಜಿಪ್ಟ್ ದೇಶದಲ್ಲಿ ಸಿದ್ಧವಾಗುವುದು. ಪ್ರತಿವರ್ಷವೂ ಕಾಬಾವಿಗೆ ಹೊಸ ದುಕೂಲ ಬರುತ್ತದೆ. ಹಿಂದಿನ ವರ್ಷದ ಕಿಸ್ವಾವನ್ನು ಕತ್ತರಿಸಿ ಯಾತ್ರಿಕರಿಗೆ ವಿಕ್ರಯಿಸಲಾಗುವುದು. ಮಸೀದಿಯೊಳಗೆ ಪ್ರಸಿದ್ಧವಾದ ಝೆಮ್ ಝೆನ್ ಬಾವಿಯಿದೆ. ಬಾವಿಯ ನೀರು ಕೊಂಚ ಉಪ್ಪು. ಈ ನೀರಿಗೆ ಪವಾಡ ಶಕ್ತಿಯಿದೆಯೆಂದು ಯಾತ್ರಿಕರ ನಂಬಿಕೆ.

	ಮೆಕ್ಕಾ ಯಾತ್ರೆಗೆ ಬರುವವರು ಬಿಳಿಯ ಬಟ್ಟೆ (ಇಹ್ರಾಮ್) ಧರಿಸಬೇಕು; ಅರಾಫತ್ ಬಯಲಿನಲ್ಲಿ ನಿಂತಿರಬೇಕು; ಮುನಾದಲ್ಲಿರುವ ಸೈತಾನನ ಪ್ರತಿಮೆಗೆ ಕಲ್ಲೆಸೆಯಬೇಕು; ಅಲ್ಲಿಂದ ಮೆಕ್ಕಾ ನಗರಕ್ಕೆ ತೆರಳಿ ಟಾವಫ್ (ಎಂದರೆ ಕಾಬಾವಿನ ಮಂಡಲಕ್ಕೆ ಪ್ರದಕ್ಷಿಣೆ ಹಾಕುವ) ವಿಧಿಯನ್ನೂ ಸಾಯ್ (ಎಂದರೆ ಸಾಫಾದಿಂದ ಮಾರ್ವಾವರೆಗೆ ಓಡುವ) ವಿಧಿಯನ್ನು ನೆರವೇರಿಸಬೇಕು; ಕೊನೆಗೆ ಮುಖಕ್ಷೌರ ಮಾಡಿಕೊಂಡು ತಲೆಗೂದಲು ಕತ್ತರಿಸಬೇಕು. 

	1924ರಲ್ಲಿ ನೇಜ್ದ್ ರಾಜ ಇಬನ್ ಸಾವೂದ್ ಮೆಕ್ಕಾ ನಗರವನ್ನು ಹಿಡಿದ. ಅಂದಿನಿಂದ ಯಾತ್ರಿಕರು ನಿರ್ಭಯವಾಗಿ ಸಂಚರಿಸಲು ಸಾಧ್ಯವಾಗಿದೆ. ಇಲ್ಲಿ ಜನಾರೋಗ್ಯ ರಕ್ಷಣೆ ಸಮರ್ಪಕವಾಗಿದೆ.	          
(ಎಂ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ